ಕಸಾವ ಪಿಷ್ಟ

 ಮ್ಯಾನಿಹಾಟ್ ಎಸ್ಕುಲೆಂಟಾ, ವ್ಯಾನಿಹಾಟ್ ಯೂಟಿಲಿಸಿಮಾ, ಮ್ಯಾನಿಹಾಟ್ ಡಲ್ಸಿಸ್ ಎಂಬ ಯುಫೋರ್ಬಿಯೇಸೀ ಜಾತಿಯ ಗಿಡಗಳ ಗೆಡ್ಡೆಯಿಂದ ತಯಾರಿಸಿದ ಪಿಷ್ಟ.  ಲ್ಯಾಟಿನ್ ಅಮೆರಿಕ, ಆಫ್ರಿಕ, ಭಾರತ ಮತ್ತು ಇಂಡೊನೇಷ್ಯಗಳಲ್ಲಿ ಗೆಡ್ಡೆಗಳನ್ನು ಆಹಾರವಾಗಿ ಉಪಯೋಗಿಸುತ್ತಾರೆ. ಮತ್ತು ಅಧಿಕ ಪ್ರಮಾಣದಲ್ಲಿ ಬೆಳೆಸುತ್ತಾರೆ. ಗೆಡ್ಡೆಗಳು ಎರಡು ಬಗೆ.  ಒಂದು ಕಹಿ, ಮತ್ತೊಂದು ಕಹಿ ಇರುವುದಿಲ್ಲ.  ಕಹಿಗೆಡ್ಡೆಯಲ್ಲಿ ಪಿಷ್ಟಪ್ರಮಾಣ ಜಾಸ್ತಿ ಇರುವುದರಿಂದ ಪಿಷ್ಟದ ತಯಾರಿಕೆಗೆ ಅದನ್ನೇ ಉಪಯೋಗಿಸುತ್ತಾರೆ. ತಯಾರಿಸುವ ವಿಧಾನ: ಗಿಡಗಳು 10-12 ತಿಂಗಳು ಬೆಳೆದ ಅನಂತರ, ಗೆಡ್ಡೆಗಳನ್ನು ಕೊಯ್ಲುಮಾಡಿ, ಮಣ್ಣು ಇತ್ಯಾದಿ ಕಲ್ಮಷಗಳನ್ನು ಹೋಗಲಾಡಿಸಲು ನೀರಿನಲ್ಲಿ ಚೆನ್ನಾಗಿ ತೊಳೆದು, ಹಾಲಿನಂಥ ದ್ರಾವಣ ಬರುವವರೆಗೆ ನೀರಿನೊಂದಿಗೆ ಜಜ್ಜಿ, ಬಟ್ಟೆ ಅಥವಾ ಜರಡಿಗಳಲ್ಲಿ ಶೋಧಿಸಿ ಬಂದ ದ್ರಾವಣವನ್ನು ತೊಟ್ಟಿಗಳಲ್ಲಿ ಕೂಡಿಡುತ್ತಾರೆ.  ಕೆಲವು ಗಂಟೆಗಳ ಅನಂತರ ಪಿಷ್ಟವೆಲ್ಲ ಕೆಳಗೆ ಶೇಖರಿಸುತ್ತದೆ.  ಮೇಲಿನ ತಿಳಿನೀರು ಉಪಯುಕ್ತವಲ್ಲ.  ಪಿಷ್ಟವನ್ನು ಕ್ಲೋರಿನ್ ಅಥವಾ ಗಂಧಕದ ಡೈಆಕ್ಸೈಡಿನಿಂದ ಚೆಲುವಿಸಿ ನೀರಿನಿಂದ ಪುನಃ ಪುನಃ ತೊಳೆದು ಒಣಗಿಸಿ ಪುಡಿಮಾಡಿ ಜರಡಿಯಾಡಿದ (140+ಮೆಹ್) ಅನಂತರ ಶುದ್ಧವಾದ ಪಿಷ್ಟ ದೊರಕುತ್ತದೆ.  ಪಿಷ್ಟದ ಹಳಕುಗಳು 5 ರಿಂದ 35 (ಸರಾಸರಿ 15) () ಗಾತ್ರವಿರುತ್ತದೆ.

 ಉಪಯೋಗ: ಆಹಾರಕ್ಕೋಸ್ಕರ ಹೆಚ್ಚಾಗಿ ಗೆಡ್ಡೆಗಳನ್ನು ಉಪಯೋಗಿಸುತ್ತಾರೆ.  ಕಸಾವಪಿಷ್ಟವನ್ನು ನೀರಿನಲ್ಲಿ ಕದರಿ ಕುದಿಸಿದರೆ ಸಮರೂಪ ದ್ರಾವಣ ಉಂಟಾಗುತ್ತದೆ.  ಇದನ್ನು ಲಾಂಡ್ರಿಗಳಲ್ಲೂ, ಅಧಿಕವಾಗಿ ಬಟ್ಟೆ ಕಾಗದ ಗೋಂದುಗಳ ತಯಾರಿಕೆಯಲ್ಲಿಯೂ ಉಪಯೋಗಿಸುತ್ತಾರೆ.  ಭಾರತದಲ್ಲಿ ತಯಾರಿಸಿದ ಬಹು ಪ್ರಮಾಣವನ್ನು (1958ರಲ್ಲಿ ತಯಾರಿಸಿದ 3,600 ಟನ್ನುಗಳಲ್ಲಿ 3,400 ಟನ್ನುಗಳನ್ನು) ಬಟ್ಟೆ ಕೈಗಾರಿಕೆಯಲ್ಲಿ ಉಪಯೋಗಿಸುತ್ತಾರೆ.      

(ಎಂ.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ